ದೀರ್ಘತಮಸ್  ಒಬ್ಬ ಬ್ರಹ್ಮರ್ಷಿ. ಈತನ ವೃತ್ತಾಂತ ಮಹಾಭಾರತದಲ್ಲಿ ಬರುತ್ತದೆ. ಈತ ಅಂಗಿರಸ ಮಹರ್ಷಿಯ ಮಗ ಉಚಥ್ಯ ಮಹರ್ಷಿಗೆ ಮಮತೆ ಎಂಬ ಹೆಂಡತಿಯಲ್ಲಿ ಹುಟ್ಟಿದವ. ತಾಯಿಯ ಗರ್ಭದಲ್ಲಿದ್ದಾಗ ಆಕೆಯನ್ನು ಬಲಾತ್ಕರಿಸಿದ ತನ್ನ ತಂದೆಯ ತಮ್ಮನಾದ ಬೃಹಸ್ಪತಿಯನ್ನು ಗರ್ಭದೊಳಗಿನಿಂದಲೇ ಈತ ಪ್ರತಿಭಟಿಸಿದ. ಕೋಪಗೊಂಡ ಬೃಹಸ್ಪತಿ ಈತನನ್ನು ಕುರುಡಾಗುವಂತೆ ಶಪಿಸಿದ ಕಾರಣ ಹುಟ್ಟುಕುರುಡನಾಗಿ ಜನಿಸಿದ; ಆದರೆ ತಂದೆಯ ಅನುಗ್ರಹದಿಂದ ಸರ್ವಜ್ಞತ್ವವನ್ನು ಪಡೆದು ಮುಂದೆ ಬ್ರಹ್ಮರ್ಷಿಯಾಗಿ ಪ್ರಸಿದ್ಧಿ ಪಡೆದ. ಈತನ ಹೆಂಡತಿ ಪ್ರದ್ವೇಷಿಣಿ. ಅವಳಲ್ಲಿ ಗೌತಮನೇ ಮೊದಲಾದ ಅನೇಕ ಪುತ್ರರಾದರು. ಹೀಗಿದ್ದರೂ ಪ್ರದ್ವೇಷಿಣಿ ಗಂಡನ ಮೇಲೆ ಸದಾ ಸಿಡಿಮಿಡಿಗೊಳ್ಳುತ್ತಿದ್ದಳಲ್ಲದೇ, ಕುರುಡುಗಂಡನನ್ನು ಕಟ್ಟಿಕೊಂಡುದರ ಫಲವಾಗಿ ಗಂಡನನ್ನೂ ಮಕ್ಕಳನ್ನೂ ಸಾಕುವ ಭಾರವನ್ನು ತಾನು ಹೊತ್ತುಕೊಳ್ಳಬೇಕಾಯಿತೆಂದು ಗಂಡನನ್ನು ಹೀಯಾಳಿಸುತ್ತಿದ್ದಳು. ಕೊನೆಗೊಂದು ದಿನ ಈಕೆ ಮಕ್ಕಳ ಸಹಾಯದಿಂದ ಗಂಡನನ್ನು ಗಂಗಾನದಿಯೊಳಕ್ಕೆ ತಳ್ಳಿಸಿಬಿಟ್ಟಳು. ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಈತನನ್ನು ಚಂದ್ರವಂಶದ ಬಲಿ ಎಂಬ ರಾಜ ರಕ್ಷಿಸಿ ಜನ್ಮಾಂಧನೆಂದು ತಿಳಿದು, ಅನುಕಂಪದಿಂದ ತನ್ನ ಅರಮನೆಯಲ್ಲೇ ಇಟ್ಟಕೊಂಡ. ಬಲಿಗೆ ಮಕ್ಕಳಿರಲಿಲ್ಲ. ಆತನ ಪಟ್ಟದ ರಾಣಿ ಸುದೇಷ್ಣೆ ದೀರ್ಘತಮಸ್ಸಿನ ಮೂಲಕ ಅಂಗ ಮುಂತಾದ ಆರು ಮಕ್ಕಳನ್ನೂ ಆ ರಾಣಿಯ ದಾಸಿ ಕಕ್ಷೀವಂತ ಮೊದಲಾದ ಹನ್ನೊಂದು ಮಕ್ಕಳನ್ನೂ ಪಡೆದರು.

ಈತನ ತಮ್ಮನೇ ಪ್ರಸಿದ್ಧನಾದ ಭರದ್ವಾಜಮುನಿ; ಮಮತೆಯಲ್ಲಿ ಬೃಹಸ್ಪತಿಯ ವೀರ್ಯದಿಂದ ಜನಿಸಿದವ. 

ದೀರ್ಘ ತಮಸ್ಸಿನ ವಿಚಾರ ಋಗ್ವೇದದಲ್ಲೂ ಬರುತ್ತದೆ. ಅಲ್ಲಿ ಜನ್ಮಾಂಧನಾದ ಈತ ಅಗ್ನಿಯ ಉಪಾಸನೆ ಮಾಡಿ ದೃಷ್ಟಿಯನ್ನು ಪಡೆಯುತ್ತಾನೆ.										(ಎಸ್.ಆರ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ